ಬರೆಯಲು ಉತ್ಸುಕತೆ ಬಂದ ಮೇಲೆ ಇನ್ನು ನಿಲ್ಲಿಸಬಾರದು. ಇದು ರೂಲು. ಹಾಗಿರುವಾಗ ಏನು ಬರೆಯುವುದು ಎಂಬ ಪ್ರಶ್ನೆ ಸ್ವಾಭಾವಿಕವಾಗಿ ಏಳುತ್ತದೆ.
ಬಹಳ ಸಲ ನಾನು ಬರೆಯಲು ಆಲೋಚಿಸುವುದು ಕಾದಂಬರಿಯನ್ನೇ. ಏಕೆಂದರೆ ಅದರ ಫಾರ್ಮ್ಯಾಟ್ ದೊಡ್ಡದಾಗಿರುತ್ತದೆ. ಕಥೆಯನ್ನು ಹಾಗೆ ಹೀಗೆ ತಿರುಗಿಸುವ ಸ್ವಾತಂತ್ರ್ಯ ಸಿಗುತ್ತದೆ.
ಉದಾಹರಣೆಗೆ ನನ್ನ ರಣವೀಳ್ಯ ಕಾದಂಬರಿಯನ್ನೇ ತೆಗೆದುಕೊಳ್ಳೋಣ. ಅದು ಒಂದು ದೊಡ್ಡ ಕಥೆ. ತುಂಬಾ ಪಾತ್ರಗಳು. ಕಥೆಯು ಎಪಿಸೋಡಿಕ್ ಆಗಿ ಮುಂದುವರೆಯುತ್ತದೆ.
ಒಮ್ಮೆ ಇಲ್ಲಿನ ಕಥೆ. ಒಂದು ಸಸ್ಪೆನ್ಸ್. ನಂತರ ಬೇರೊಂದು ಎಳೆಯನ್ನು ಎಳೆ ತರುವುದು. ಅಲ್ಲಿಯೂ ಕುತೂಹಲದಲ್ಲಿ ನಿಲ್ಲಿಸಿ ಮತ್ತೆ ಮುಂದಿನ ಸನ್ನಿವೇಶವನ್ನು ಪ್ರವೇಶಿಸುವುದು. ಇದರಲ್ಲಿ ಬಹಳವೇ ಎಚ್ಚರ ಬೇಕು. ಸ್ವಲ್ಪ ಲಯ ತಪ್ಪಿದರೆ ತರ್ಕವು ಸೋಲುತ್ತದೆ. ಕಥೆಯೂ ಸೋತುಹೊಗುತ್ತದೆ.
ಅದಕ್ಕೇ ಮಹಾನ್ ಲೇಖಕರು ಮಹಾನ್ ಆಗುತ್ತಾರೆ.
ಆದರೆ ಮಿನಿ ಕಥೆಗಳ ಮಜವೇ ಬೇರೆ. ಅತಿ ಕಡಿಮೆ ಶಬ್ದಗಳಲ್ಲಿ ಕಥೆಯನ್ನು ಹೇಳಬೇಕು.
ಒಂದು ಉದಾಹರಣೆ.
ಒಬ್ಬಾತ ಸ್ಮಶಾನದಲ್ಲಿ ರಾತ್ರಿ ಹನ್ನೆರಡು ಗಂಟೆಗೆ ಹೋಗುತ್ತಿದ್ದ. ಒಂದು ಸಮಾಧಿಯ ಮೇಲೆ ಒಬ್ಬ ವ್ಯಕ್ತಿ ಕುಳಿತಿದ್ದುದು ಕಂಡು ಬಂತು.
ಆ ವ್ಯಕ್ತಿಯ ಬಳಿಗೆ ಹೋಗಿ ಅವನು 'ಏನು ಸ್ವಾಮೀ, ಈ ಸ್ಮಶಾನದಲ್ಲಿ ದೆವ್ವ ಇದೆ ಎನ್ನುತ್ತಾರೆ. ನಿಜವೇ?' ಎನ್ನುತ್ತಾನೆ.
ಆ ವ್ಯಕ್ತಿ ನಿಟ್ಟುಸಿರಿಟ್ಟು 'ನನಗೆ ಗೊತ್ತಿಲ್ಲ ಸಾರ್. ನಾನು ಸತ್ತು ತುಂಬಾ ವರ್ಷಗಳಾದವು' ಎನ್ನುತ್ತದೆ.
ಇವನ ಗತಿ? ದೇವರೇ ಗತಿ!
ಏಕೆಂದರೆ ಅದು ಅವನಿಗೆ ಗೊತ್ತಿರಲಿಲ್ಲ.
ಇದನ್ನು ಸಸ್ಪೆನ್ಸ್ ಕಥೆ ಎನ್ನಬಹುದು. ಹಾರರ್ ಸ್ಟೋರಿ ಎನ್ನಬಹುದು. .. ಒಟ್ಟಿನಲ್ಲಿ ಬಹಳವೇ ಕುತೂಹಲಕಾರಿ ಮಿನಿ ಕಥೆ ಅಲ್ಲವೇ?
No comments:
Post a Comment